ಗ್ರ್ಯಾಂಡ್ ಐಲೆಂಡ್

	ಅಮೆರಿಕ ಸಂಯುಕ್ತ ಸಂಸ್ಥಾನಗಳ ನಿಬ್ರ್ಯಾಸ್ಕ ರಾಜ್ಯದ ಆಗ್ನೇಯ ಭಾಗದಲ್ಲಿರುವ ಒಂದು ನಗರ. ಹಾಲ್ ಕೌಂಟಿಯ ಮುಖ್ಯ ಪಟ್ಟಣ. ಅದು ಲಿಂಗ್ಕನ್ ನಗರದ ಪಶ್ಚಿಮಕ್ಕೆ 85 ಮೈ. ದೂರದಲ್ಲೂ ಓಮಹಾ ನಗರದ ನೈಋತ್ಯಕ್ಕೆ 140 ಮೈ. ದೂರದಲ್ಲೂ ಇದೆ. ಪ್ಲ್ಯಾಟ್ ನದಿಯಲ್ಲಿರುವ ಮಹಾ ದ್ವೀಪದಿಂದಾಗಿ (ಗ್ರ್ಯಾಂಡ್ ಐಲೆಂಡ್) ಈ ನಗರಕ್ಕೆ ಈ ಹೆಸರು ಬಂತು. ಇಲ್ಲಿಗೆ ಬಂದ ಮೊದಲ ಪರಿಶೋಧಕರು ಈ ದ್ವೀಪವನ್ನು ಒಂದು ಹೆಗ್ಗುರುತಾಗಿ ಪರಿಗಣಿಸಿದ್ದರು. ನಗರದ ಜನಸಂಖ್ಯೆ 25,742 (1960). ಸಾರಿಗೆ ಸೌಲಭ್ಯಗಳಿದ್ದ ಈ ನಗರವನ್ನು ಸ್ಥಾಪಿಸಿದವರು ಜರ್ಮನಿಯ ವಲಸೆಗಾರರು (1857). ನಗರದ ಆಧುನಿಕ ಭಾಗವನ್ನು 1866ರಲ್ಲಿ ರಚಿಸಲಾಯಿತು.

	ಯೂನಿಯನ್ ಪೆಸಿಫಿಕ್ ಮತ್ತು ಬರ್ಲಿಂಗ್ಟನ್ ರೈಲುಮಾರ್ಗಗಳು ಈ ನಗರದ ಮೂಲಕ ಹಾದುಹೋಗುತ್ತವೆ. ನಿಬ್ರಾಸ್ಕ ರಾಜ್ಯದ ಹೆದ್ದಾರಿಯ ಕೇಂದ್ರವಾಗಿಯೂ ಈ ನಗರ ಅಭಿವೃದ್ಧಿ ಹೊಂದಿತ್ತು. 20ನೆಯ ಶತಮಾನದಲ್ಲಿ ಪ್ಲ್ಯಾಟ್ ನದಿಯನ್ನು ನೀರಾವರಿಗೆ ಬಳಸಿಕೊಳ್ಳಲಾರಂಭಿಸಿದ ಮೇಲೆ ಈ ನಗರ ನೀರಾವರಿಯ ಕೇಂದ್ರವಾಯಿತು. ಸಕ್ಕರೆ ಬೀಟ್ ಪರಿಷ್ಕರಣ, ಮಾಂಸದ ಡಬ್ಬೀಕರಣ, ಧಾನ್ಯಗಳ ದಾಸ್ತಾನು ಈ ನಗರದ ಮುಖ್ಯ ಉದ್ಯಮಗಳು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ